Veerasaiva Vidyavardhaka Sangha08392-257444ಹುಡುಕಿEnglish
ವೀರಶೈವ ವಿದ್ಯಾವರ್ಧಕ ಸಂಘ, ಬಳ್ಳಾರಿಬಳ್ಳಾರಿ, ಕರ್ನಾಟಕ

ಸಂಘದ ಇತಿಹಾಸ

1916ರ ವಿದ್ಯಾರ್ಥಿಗಳ ವಿಶ್ರಾಂತಿ ನಿಲಯದಿಂದ 11 ಊರುಗಳಲ್ಲಿ 57 ಸಂಸ್ಥೆಗಳವರೆಗೆ.

ನಮ್ಮ ಸಂಘ : ನಮ್ಮ ಹೆಮ್ಮೆ

ಕರ್ನಾಟಕದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘವು ಸ್ಥಾಪನೆಯಾಗಿ ಇದೀಗ ನೂರು ಸಂವತ್ಸರಗಳನ್ನು ಪೂರೈಸಿದೆ. ಒಂದು ಶತಮಾನದವರೆಗೆ ವಿದ್ಯಾದಾನ ಮಾಡಿದ, ಶೈಕ್ಷಣಿಕ ಗುಣಮಟ್ಟವನ್ನು ಕಾಲಮಾನಕ್ಕೆ ತಕ್ಕಂತೆ ಸುಧಾರಿಸಿಕೊಂಡ ಮತ್ತು ಪೂರ್ಣಪ್ರಮಾಣದ ಶ್ರದ್ಧೆ ಮತ್ತು ತಾದಾತ್ಮ್ಯಗಳನ್ನು ಉಳಿಸಿಕೊಂಡ ಈ ಸಂಘವು ಹೆಮ್ಮೆ, ಧನ್ಯತೆ ಮತ್ತು ಸಾರ್ಥಕತೆಗಳನ್ನು ಅನುಭವಿಸುವ ಚಾರಿತ್ರಿಕ ಸಂದರ್ಭಕ್ಕೆ ಬಂದು ತಲುಪಿದೆ.

ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಬ್ರಿಟಿಶ್ ಆಡಳಿತವ್ಯಾಪ್ತಿಯ ವಿಶಾಲ ಪ್ರಾಂತವಾದ ಮದ್ರಾಸ್ ಪ್ರಾವೆನ್ಸಿಗೆ ಸೇರಿದ್ದ ಬಳ್ಳಾರಿಯು ಇಪ್ಪತ್ತು ತಾಲೂಕುಗಳನ್ನೊಳಗೊಂಡ ವಿಶಾಲಜಿಲ್ಲೆಯಾಗಿತ್ತು. ರಾಜಕೀಯ ಸ್ಥಿತ್ಯಂತರ, ಅನಿಯಮಿತ ಆಡಳಿತಪದ್ಧತಿ, ಅವೈಜ್ಞಾನಿಕ ತಾಲೂಕು ವಿಂಗಡಣೆ – ಸೇರ್ಪಡಿಸುವಿಕೆ, ಪರಿಮಿತಿಯ ಶೈಕ್ಷಣಿಕ ವ್ಯವಸ್ಥೆ ಮತ್ತು ಅನಿರ್ದಿಷ್ಟ ಕ್ರಮದ ಪಠ್ಯಬೋಧನೆ, ಮುಖ್ಯವಾಗಿ ಪ್ರಾವೆನ್ಸಿಯ ಆಡಳಿತ ಕೇಂದ್ರವಾದ ಮದ್ರಾಸ್‌ನಿಂದ ದೂರವಿದ್ದ ಕಾರಣದಿಂದ ಉಂಟಾಗಿದ್ದ ಉಪೇಕ್ಷೆ – ಇಂಥ ಹಲವು ಗೊಂದಲಮಯ ಅನಿಶ್ಚಿತ ವಿದ್ಯಮಾನಗಳಿಂದ ಬಳ್ಳಾರಿ ಜಿಲ್ಲೆಯು ಅಕ್ಷರಶಃ ಹಿಂದುಳಿದ ಜಿಲ್ಲೆಯಾಗಿತ್ತು. ಸುಮಾರು ಒಂದೂವರೆ ಶತಮಾನಗಳ ಇಂಥ ಅನಾಥಪ್ರಜ್ಞೆಯನ್ನು ಅನುಭವಿಸಿದ್ದ ಈ ಜಿಲ್ಲಾ ಪರಿಸರವನ್ನು BACK DISTRICTS AREA ಎಂದೇ ಕರೆಯಲಾಗಿತ್ತು. ಇಂಥ ಅರಾಜಕ ರಾಜಕೀಯ ಪರಿಸ್ಥಿತಿ ಮತ್ತು ಅವೈಜ್ಞಾನಿಕ ಆಡಳಿತಾತ್ಮಕ ಕಾರಣಗಳಿಂದ ಸಾಮಾಜಿಕಸ್ಥಿತಿ ಸಹಜವಾಗಿ ಗಂಭೀರವಾಗಿಯೇ ಇತ್ತು. ಶೈಕ್ಷಣಿಕ ಸೌಲಭ್ಯವೇ ಎಲ್ಲಾ ಸಮಸ್ಯೆಗಳಿಗೆ ಪರಿಹಾರವೆಂಬುದು ತಿಳಿದಿದ್ದರಿಂದ ಅದನ್ನು ಪೂರೈಸುವುದು ಅಂದಿನ ಮೂಲಭೂತ ಅಗತ್ಯವೆನಿಸಿತ್ತು. ಬಡತನ, ಅನಕ್ಷರತೆ, ನಿರುದ್ಯೋಗ – ಇವುಗಳಿಂದ ಸಮಾಜ ಅಸಮತೋಲನ ಮತ್ತು ವಿಲೋಮವಾಗುತ್ತಿದ್ದುದನ್ನು ಅರ್ಥೈಸಿಕೊಂಡ ಬಳ್ಳಾರಿಯ ಅಂದಿನ ವೀರಶೈವ ಸಮಾಜದ ಪ್ರಜ್ಞಾವಂತ ಗಣ್ಯರೆಲ್ಲ ಸೇರಿ ಸಮಾಜದ ಎಲ್ಲಾ ಜಾತಿ, ವರ್ಣ, ವರ್ಗಗಳಲ್ಲಿ ಆವರಿಸಿದ್ದ ಈ ದಾರಿದ್ರ್ಯವನ್ನು ನಾಶಪಡಿಸಲು ಪರಿಹಾರೋಪಾಯಗಳನ್ನು ಕಂಡುಕೊಂಡರು. ಇದು ಚಾರಿತ್ರಿಕ ಸಂದರ್ಭಕ್ಕೆ ನಾಂದಿಯೂ ಆಯಿತು. ಪ್ರಸಾದ ನಿಲಯ ಮತ್ತು ವಿದ್ಯಾಲಯಗಳ ಸ್ಥಾಪನೆಯಿಂದ ಮಾತ್ರ ಸಮಗ್ರಸಮಾಜದ ಸುಧಾರಣೆ–ಅಭಿವೃದ್ಧಿ ಸಾಧ್ಯ ಎಂಬುದನ್ನು ಅಂದಿನ ಹಿರಿಯರು ಅರ್ಥ ಮಾಡಿಕೊಂಡದ್ದು ಚರಿತ್ರೆಯ ಸಾಕ್ಷ್ಯದಲ್ಲಿ ನಡೆದಿದೆ.

ಸ್ವಾತಂತ್ರ್ಯಪೂರ್ವ ಸಂದರ್ಭವು ಆಂಶಿಕ ಅನುದಾನದಲ್ಲಿ ಜಿಲ್ಲಾ ಮತ್ತು ತಾಲೂಕು ಬೋರ್ಡ್ ಶಾಲೆಗಳಿಂದ ಲೌಕಿಕ ಉದ್ದೇಶದ ಶಿಕ್ಷಣವನ್ನು, ಕ್ರೈಸ್ತ ಮಿಶನರಿಗಳಿಂದ ಧಾರ್ಮಿಕ ಉದ್ದೇಶದ ಶಿಕ್ಷಣವನ್ನು ಒಂದು ನಿರ್ದಿಷ್ಟ ಪರಿಮಿತಿಯಲ್ಲಿ ಒದಗಿಸುತ್ತಿತ್ತು. ಅಲ್ಲದೇ, ಅದು ನೀಡುತ್ತಿದ್ದ ಸೀಮಿತವಲಯದ ಪ್ರಾಥಮಿಕ – ಪ್ರೌಢ ಶಿಕ್ಷಣವನ್ನು ಗಮನಿಸಿದ್ದ ಬಳ್ಳಾರಿಯ ವೀರಶೈವಸಮಾಜದ ಹಿರಿಯರು ಸಾಮುದಾಯಿಕ ಹೊಣೆಗಾರಿಕೆಯನ್ನು ಅರಿತು ಸ್ವತಃ ಶೈಕ್ಷಣಿಕ ಅಗತ್ಯವನ್ನು ಆವಾಹಿಸಿಕೊಂಡ ಪರಿಣಾಮವಾಗಿ 1916 ರಲ್ಲಿ ಬಳ್ಳಾರಿಯಲ್ಲಿ ‘ವೀರಶೈವ ವಿದ್ಯಾವರ್ಧಕ ಸಂಘ’ವನ್ನು ಸ್ಥಾಪಿಸಿದರು. ಇದು ಒಂದು ಅರ್ಥದಲ್ಲಿ ಶೈಕ್ಷಣಿಕ ವಿಕೋಪ ಸಂದರ್ಭದ ವಿರುದ್ಧ ನಡೆದ ಹೋರಾಟವೂ ಆಗಿದೆ!

ಕನ್ನಡ – ಮನೆಯಭಾಷೆಯಾಗಿ, ತೆಲುಗು – ಶಾಲೆಯಭಾಷೆಯಾಗಿ, ತಮಿಳು – ಆಡಳಿತಭಾಷೆಯಾಗಿ ಇದ್ದ ಸ್ವಾತಂತ್ರ್ಯಪೂರ್ವದ ಕಾಲಘಟ್ಟದಲ್ಲಿ ಇಂಥ ವಿದ್ಯಾವರ್ಧಕ ಸಂಘದ ಸ್ಥಾಪನೆಯ ಅಗತ್ಯವನ್ನು ಗ್ರಹಿಸಿದ್ದು ಇಂದು ಸಾಹಸಕಾರ್ಯವೆನಿಸುತ್ತದೆ. ವಿದ್ಯೆಗೆ ಅನುಕೂಲ ಮಾಡಿಕೊಡುವ ಉದ್ದೇಶ ಸ್ಪಷ್ಟವಾಗಿತ್ತಾದರೂ ಆರ್ಥಿಕ ಮೊದಲಾದ ಸಂಕಷ್ಟಗಳಿದ್ದ ವಾತಾವರಣವು ಸುಗಮದ ಹಾದಿಯನ್ನು ನಿರ್ಮಿಸಿಕೊಡುವಂತಿರಲಿಲ್ಲ! ಆದರೆ ಅದನ್ನು ಅರ್ಥಪೂರ್ಣವಾಗಿ ಸ್ಮರಿಸುವ ಪುಣ್ಯದ ಕಾರ್ಯ ಇಂದು ನಮ್ಮದಾಗಿದೆ.

ವಾಸ್ತವವಾಗಿ, ವಿದ್ಯಾವರ್ಧಕ ಸಂಘದ ಸ್ಥಾಪನೆಯ ಬೀಜ ವಿಚಾರ ಮೂಡಿದ್ದು 1909 ರಲ್ಲಿ. ಬಳ್ಳಾರಿಯಲ್ಲಿ 1909 ರ ಡಿಸೆಂಬರ್ 27 ರಿಂದ 30 ರ ವರೆಗೆ ನಡೆದ ಅಖಿಲಭಾರತ ವೀರಶೈವ ಮಹಾಸಭಾದ ಐದನೇ ಮಹಾಧಿವೇಶನದಲ್ಲಿ ಶ್ರೀ ಮ.ನಿ.ಪ್ರ. ಹಾನಗಲ್ ಕುಮಾರ ಮಹಾಸ್ವಾಮಿಗಳ ಮತ್ತು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ದೂರದರ್ಶಿತ್ವ ಮತ್ತು ದೃಢಸಂಕಲ್ಪದ ಮೇರೆಗೆ ಮಂಡಿತವಾದ ನಿರ್ಣಯದಲ್ಲಿ ವಿದ್ಯಾವರ್ಧಕ ಸಂಘವು ಅಂಕುರಗೊಂಡು, 1912 ರಲ್ಲಿ ಪಲ್ಲವಿಸಿ, 1916 ರಲ್ಲಿ ಹೂವಾಗಿ ಅರಳುವುದರ ಮೂಲಕ ಗುರುಹಿರಿಯರ ಸಂಕಲ್ಪಕ್ಕೆ ಮೂರ್ತ ರೂಪ ನೀಡಿತು. ಐವರು ಪದಾಧಿಕಾರಿಗಳು, ಇಪ್ಪತ್ತು ಸದಸ್ಯರ ಕಾರ್ಯಕಾರಿ ಸಮಿತಿಯನ್ನು ರೂಪಿಸಲಾಯಿತು. 1916 ರ ಆಗಸ್ಟ್ ತಿಂಗಳಲ್ಲಿ ಬಳ್ಳಾರಿಯ ಚಾರಿತ್ರಿಕ ಮಹತ್ವದ ಸಕ್ಕರಿ ಕರಡೆಪ್ಪನವರ ಚೌಕಿಯಲ್ಲಿ ‘ವಿದ್ಯಾರ್ಥಿಗಳ ವಿಶ್ರಾಂತಿ ನಿಲಯ’ದ ಮೂಲಕ ಕೌತಾಳ ಯಜಮಾನ್ ಗುರುಶಾಂತಪ್ಪನವರ ಅಧ್ಯಕ್ಷತೆಯಲ್ಲಿ ವೀ.ವಿ. ಸಂಘದ ಕಾರ್ಯ ಆರಂಭವಾಯಿತು. ಹೀರದ ಕರಿಬಸಪ್ಪನವರು ಮೊದಲ ಕಾರ್ಯದರ್ಶಿಗಳಾಗಿದ್ದರು.

ವೀರಶೈವ ವಿದ್ಯಾವರ್ಧಕ ಸಂಘವು ಸ್ಥಾಪನೆಯಾದ ಆರಂಭ ಕಾಲದಿಂದಲೂ ಹಿಂದುಳಿದ ಬಳ್ಳಾರಿ ಜಿಲ್ಲೆಗೆ ಮೂಲಭೂತ ಅವಶ್ಯಕತೆಯೆನಿಸಿದ್ದ ಆರಂಭಿಕ ಶಿಕ್ಷಣ ಒದಗಿಸುವುದನ್ನೇ ತನ್ನ ಉದ್ದೇಶಗಳ ಕೇಂದ್ರದಲ್ಲಿರಿಸಿಕೊಂಡಿತ್ತು: ಮಾತೃಭಾಷೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ; ಮಹಿಳೆಯರಿಗೆ ಶಿಕ್ಷಣ; ಗ್ರಾಮೀಣ ವಿದ್ಯಾರ್ಥಿಗಳಿಗೆ ವಿದ್ಯಾನುಕೂಲ; ಪ್ರಾಥಮಿಕ ಶಿಕ್ಷಣ; ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ; ಗ್ರಾಮೀಣ ಪರಿಸರದಲ್ಲಿ ಶಿಕ್ಷಣ; ತಾಂತ್ರಿಕ ಶಿಕ್ಷಣ ಇತ್ಯಾದಿ. ಇದಕ್ಕೆ ಪೂರಕವಾಗಿ ಜಿಲ್ಲೆಯಾದ್ಯಂತ ಉಚಿತ ಪ್ರಸಾದನಿಲಯಗಳ ಸ್ಥಾಪನೆ, ಅನ್ಯಸ್ವಾಮ್ಯದ ಪ್ರಸಾದನಿಲಯಗಳಿಗೆ ಆರ್ಥಿಕ ನೆರವು; ಸ್ಥಳೀಯ ಸಂಪನ್ಮೂಲಗಳ ಕ್ರೋಢೀಕರಣ ಮತ್ತು ವಿತರಣೆ, ಇತ್ಯಾದಿ.

ಯಾವುದೇ ಕಾಲದ ಸಮಾಜದ ಸರ್ವತೋಮುಖ ಅಭಿವೃದ್ಧಿಯು ಇಂಥ ಶೈಕ್ಷಣಿಕ ಸೌಲಭ್ಯವನ್ನು ವಿವಿಧ ಆಯಾಮಗಳಲ್ಲಿ ಒದಗಿಸುವುದರ ಮತ್ತು ಕ್ರಮೇಣ ವಿಸ್ತರಿಸುವುದರ ಮೂಲಕ ಸಾಧಿಸಲು ಸಾಧ್ಯವಾಗುತ್ತದೆ ಎಂದು ಸಂಘವು ನಂಬಿಕೊಂಡಿತ್ತು. ಆದ್ದರಿಂದ ಆರಂಭದಿಂದಲೂ ಜಾತ್ಯತೀತ ಮೌಲ್ಯಗಳು, ವಾಣಿಜ್ಯೇತರ ದೃಷ್ಟಿಕೋನ, ನಿಸ್ವಾರ್ಥ ಮನೋಧರ್ಮಗಳನ್ನು ತನ್ನ ಸೇವೆಯ ಉದ್ದೇಶದಲ್ಲಿ ಧೋರಣೆಯಾಗಿರಿಸಿಕೊಂಡಿತ್ತು. ಒಂದು ನಿರ್ದಿಷ್ಟ ಸಮಾಜದ, ಅಂದರೆ ವೀರಶೈವ ಸಮಾಜದ ಪ್ರಜ್ಞಾವಂತರು – ವಿದ್ಯಾವರ್ಧಕ ಸಂಘ ಎಂಬ ಖಾಸಗಿ ಶಿಕ್ಷಣಸಂಸ್ಥೆಯನ್ನು ಸ್ಥಾಪಿಸಿ ನಾಡಿನ ಅಗತ್ಯವನ್ನು ಪೂರೈಸಿದ್ದು ಮದ್ರಾಸ್ ಪ್ರಾವೆನ್ಸಿಯ ಇತಿಹಾಸದಲ್ಲಿ ಪ್ರಪ್ರಥಮವಾಗಿದೆ. ಇದು ಚಾರಿತ್ರಿಕ ಮಹತ್ವದ ಅಂಶ. ಪ್ರಾವೆನ್ಸಿ ಆಡಳಿತ ಮತ್ತು ಜಿಲ್ಲಾ ಬೋರ್ಡ್ – ತಾಲೂಕು ಬೋರ್ಡ್‌ಗಳಿಗೇ ಶಿಕ್ಷಣ ಸೌಲಭ್ಯವನ್ನು ಒದಗಿಸುವುದು ಕಷ್ಟಸಾಧ್ಯವೆನಿಸಿದ್ದಾಗ ಈ ಯುವ ವೀರಶೈವ ವಿದ್ಯಾವರ್ಧಕ ಸಂಘವು ಖಾಸಗಿ ಶಿಕ್ಷಣ ಸಂಸ್ಥೆಯಾಗಿ ಧೈರ್ಯದ ದಿಟ್ಟಹೆಜ್ಜೆಯನ್ನಿರಿಸಿದ್ದು ಸಾಹಸಮಯ ಅಂಶವೂ ಆಗಿದೆ.

‘ವಿದ್ಯಾರ್ಥಿ ವಿಶ್ರಾಂತಿ ನಿಲಯ’ದೊಂದಿಗೆ ಆರಂಭವಾಗಿ, ಉಚಿತ ಪ್ರಸಾದ ನಿಲಯ, ಹೀರದ ಸೂಗಮ್ಮ ಕನ್ನಡ ಪ್ರಾಥಮಿಕ ಶಾಲೆ (1924)ಯ ಮೂಲಕ ತನ್ನ ಮುಂದಡಿಯನ್ನಿರಿಸಿತು. ಪರಸ್ಥಳದ ಮಕ್ಕಳಿಗೆ, ಪ್ರತಿಭಾವಂತ ಬಡಮಕ್ಕಳಿಗೆ ಜಾತ್ಯತೀತವಾಗಿ ಅಕ್ಷರ ಮತ್ತು ಅನ್ನ ಒದಗಿಸುವ ತನ್ನ ಕಾರ್ಯವನ್ನು ಸಂಘವು ವಿಸ್ತರಿಸುವ ಉದ್ದೇಶದಿಂದ ಸ್ಥಾಪನೆಯ ರಜತಮಹೋತ್ಸವ ಸಂದರ್ಭವನ್ನು ಚಿರಸ್ಥಾಯಿಗೊಳಿಸಲು ಹಲವು ಯೋಜನೆಗಳನ್ನು ರೂಪಿಸಿತು. ಈ ಪ್ರದೇಶದ ಗ್ರಾಮೀಣ ಭಾಗದ ಅಗತ್ಯವೆನಿಸಿದ್ದ ಪ್ರೌಢಶಿಕ್ಷಣದತ್ತ ಮುಖ ಮಾಡಿದ್ದರ ಫಲವಾಗಿ ‘ಶೆಟ್ರು ಗುರುಶಾಂತಪ್ಪ ಪ್ರೌಢಶಾಲೆ’ಯನ್ನು (1942) ಆರಂಭಿಸಿತು. ನಂತರದ ಗಂಭೀರ ಮತ್ತು ಸಾಹಸದ ಹೆಜ್ಜೆಯೆಂದರೆ ಮಹಾವಿದ್ಯಾಲಯದ ಸ್ಥಾಪನೆಗೆ ಮನಸ್ಸು ಮಾಡಿದ ಪರಿಣಾಮವಾಗಿ 1945 ರಲ್ಲಿ ‘ವೀರಶೈವ ಕಾಲೇಜು’ ಸ್ಥಾಪನೆಯಾಯಿತು. ಸಂಘದ ಈ ಶ್ರೇಷ್ಠ ಶೈಕ್ಷಣಿಕ ನಿರ್ಧಾರದ ಎರಡು ಪ್ರಮುಖ ಅಂಶಗಳೆಂದರೆ, ಪೂರ್ಣ ಪ್ರಮಾಣದ ಕನ್ನಡ ಮಾಧ್ಯಮದ ಪ್ರೌಢಶಿಕ್ಷಣ ಮತ್ತು ಪದವಿ ಶಿಕ್ಷಣ ನೀಡುವ ಈ ಎರಡೂ ವಿದ್ಯಾಲಯಗಳು ಜಿಲ್ಲೆಯ ಮೊಟ್ಟ ಮೊದಲ ವಿದ್ಯಾಲಯಗಳೆಂಬುದು; ಅದೂ ಖಾಸಗಿ ಶಿಕ್ಷಣ ಸಂಸ್ಥೆಯೊಂದರಿಂದ. ಅದೇ ರೀತಿಯಾಗಿ ಮದ್ರಾಸ್ ಪ್ರಾವೆನ್ಸಿಯಲ್ಲಿಯೇ ಈ ಪ್ರಯೋಗಾತ್ಮಕ ಸಾಧನೆಯನ್ನು ಮಾಡಿದ ಮೊದಲ ಖಾಸಗಿ ಶಿಕ್ಷಣಸಂಸ್ಥೆಯೆಂಬುದು. ದಕ್ಷಿಣಭಾರತದ ಖಾಸಗಿಸಂಸ್ಥೆಗಳ ಇತಿಹಾಸದಲ್ಲಿ ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಈ ಶೈಕ್ಷಣಿಕ ಹಂತವನ್ನು ದಾಟಿದ ಮಹತ್ವದ ಸ್ಥಾನವಂತೂ ಇದರಿಂದ ಲಭ್ಯವಾಗಿದೆ.

ಸಂಘ ಸ್ಥಾಪನೆಯಾಗಿ ನಾಲ್ಕೂವರೆ ದಶಕಗಳನ್ನು ದಾಟಿ ಬಂದರೂ ಹಿರಿಯ ಪ್ರಾಥಮಿಕ ಶಿಕ್ಷಣ, ಪ್ರೌಢಶಿಕ್ಷಣ, ಪದವಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ವಿದ್ಯಾಲಯಗಳನ್ನು ಮಾತ್ರ ಆರಂಭಿಸಲು ಸಾಧ್ಯವಾಗಿತ್ತು. ಇದಕ್ಕೆ ಪ್ರತಿಕೂಲವಾಗಿದ್ದ ಆಡಳಿತ ವಿಧಾನ, ಅನುದಾನದ ಕೊರತೆ, ವಿದ್ಯಾ ಇಲಾಖೆಯ ಅಸಹಕಾರ, ಆರ್ಥಿಕ ಸಂಕಷ್ಟ, ಶೈಕ್ಷಣಿಕ – ಭೌತಿಕ ಸಂರಚನೆಗೆ ಅಪ್ರಾಯೋಗಿಕ ನಿಯಮಾವಳಿಗಳು ಇವೇ ಮೊದಲಾದ ಪರಿಸ್ಥಿತಿಗಳು ಶೈಕ್ಷಣಿಕ ವಿಸ್ತಾರವನ್ನು ಮಾಡಲು ಪ್ರತಿಕೂಲವೆನಿಸಿದ್ದವು. ಬದಲಾದ ಕಾಲಮಾನದ ಅಗತ್ಯಕ್ಕೆ ತಕ್ಕಂತೆ ವೀರಶೈವ ವಿದ್ಯಾವರ್ಧಕ ಸಂಘವು ರಚನಾತ್ಮಕವಾಗಿ ಸ್ಪಂದಿಸುತ್ತ ಕಳೆದ ಶತಮಾನದ ಆರನೇ ದಶಕದಿಂದಲೇ ತನ್ನ ಯಶೋಯಾತ್ರೆಯನ್ನು ಆರಂಭಿಸಿ ಶಿಕ್ಷಣ ಮಹಾವಿದ್ಯಾಲಯ, ಪದವಿ ಮಹಿಳಾ ಮಹಾವಿದ್ಯಾಲಯ, ಕಾನೂನು ಪದವಿ ಮಹಾವಿದ್ಯಾಲಯ, ತಾಂತ್ರಿಕ ಮಹಾವಿದ್ಯಾಲಯ, ಔಷಧೀಯ ವಿಜ್ಞಾನ ಮಹಾವಿದ್ಯಾಲಯ, ಪಾಲಿಟೆಕ್ನಿಕ್, ಮ್ಯಾನೇಜ್‌ಮೆಂಟ್ ಕಾಲೇಜ್ ಮತ್ತು ಪ್ರೌಢಶಾಲೆಗಳನ್ನು ಪದವಿ ಪೂರ್ವ ಮಹಾವಿದ್ಯಾಲಯಗಳನ್ನಾಗಿ ಉನ್ನತೀಕರಿಸಿದ್ದು ಮತ್ತಷ್ಟು ಪ್ರೌಢಶಾಲೆಗಳನ್ನು ಆರಂಭಿಸಿ ಜಿಲ್ಲಾ ಕೇಂದ್ರವನ್ನು ಸಮೃದ್ಧಗೊಳಿಸಲಾಯಿತು.

ಸಂಘವು ತನ್ನ ಉದ್ದೇಶವನ್ನು ವಿಸ್ತರಿಸುವ ದೃಷ್ಟಿಗನುಗುಣವಾಗಿ ಜಿಲ್ಲೆಯಾದ್ಯಂತ ಅಂದರೆ ಹೊಸಪೇಟೆ, ಮುನಿರಾಬಾದ್, ಕುಡಿತಿನಿ, ಸಿರಗುಪ್ಪ, ಕೊಟ್ಟೂರು, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ತಂಬ್ರಹಳ್ಳಿಗಳಲ್ಲಿ ಪ್ರೌಢ – ಪದವಿಪೂರ್ವ – ಪದವಿ – ತಾಂತ್ರಿಕ – ಔಷಧೀಯ ವಿಜ್ಞಾನ ಮಹಾವಿದ್ಯಾಲಯಗಳನ್ನು ಆರಂಭಿಸಿ ವಿದ್ಯಾಸೇವೆಯನ್ನು ಜಿಲ್ಲೆಯಾದ್ಯಂತ ಹಬ್ಬಿಸಿತು.

ಆಧುನಿಕ – ಅತ್ಯಾಧುನಿಕ ಯುಗದ ಶೈಕ್ಷಣಿಕ ಅಗತ್ಯವಾದ ವೃತ್ತಿಪರ ಕೋರ್ಸ್‌ಗಳನ್ನು ಮತ್ತು ಸಂಘದ ಆಡಳಿತ ವ್ಯಾಪ್ತಿಯ ಏಳು ಮಹಾವಿದ್ಯಾಲಯಗಳಲ್ಲಿ ಅನುದಾನರಹಿತ ಸ್ನಾತಕೋತ್ತರ ಪದವಿ ಕೇಂದ್ರಗಳನ್ನು ಆರಂಭಿಸಿತು.

ಅಂದರೆ, ವೀರಶೈವ ವಿದ್ಯಾವರ್ಧಕ ಸಂಘವು ವಿದ್ಯಾಕಾಂಕ್ಷಿ ಮಗುವಿನ ಶಿಶುವಿಹಾರದಿಂದ ಆರಂಭಗೊಂಡು ಸ್ನಾತಕೋತ್ತರ ಪದವಿಯವರೆಗೆ ಜೀವಮಾನಪೂರ್ಣ ಶಿಕ್ಷಣವನ್ನು ನೀಡುವ ಮಹಾಕಾರ್ಯವನ್ನು ಪೂರೈಸುವಂಥಾಯಿತು.

ಬಡ ಪ್ರತಿಭಾವಂತ ಮತ್ತು ಗ್ರಾಮೀಣ ಭಾಗದ ಬೆರಳೆಣಿಕೆಯ ವಿದ್ಯಾಕಾಂಕ್ಷಿಗಳಿಗೆ ಅನ್ನದ ಅನುಕೂಲಮಾಡಿ ಪ್ರಸಾದನಿಲಯದ ಮೂಲಕ ಆರಂಭವಾದ ವೀರಶೈವ ವಿದ್ಯಾವರ್ಧಕ ಸಂಘ ನೂರು ತುಂಬಿದ ಈ ಸಂದರ್ಭದಲ್ಲಿ ಅಕ್ಷರ ನೀಡುವ ವಿದ್ಯಾಲಯಗಳನ್ನು ಯಥೇಚ್ಛವಾಗಿ ಜಿಲ್ಲೆಯಾದ್ಯಂತ ನೀಡಿ ಕನ್ನಡನಾಡಿನ ಪ್ರತಿಷ್ಠಿತ ಶಿಕ್ಷಣಸಂಸ್ಥೆಗಳಲ್ಲಿ ಒಂದಾಗಿ ಬೆಳೆದು ನಿಂತಿರುವುದು ಚರಿತ್ರೆಯ ಸಾಕ್ಷ್ಯದಲ್ಲಿ ಈಗಾಗಲೇ ಘಟಿಸಿದೆ.

ನೊಂದು, ಬೆಂದುಹೋಗಿದ್ದ ನೆಲದಲ್ಲಿ ಅಕ್ಷರದ ಬೀಜವ ಬಿತ್ತಿ, ಮೊಳಕೆಯೊಡೆದು ಸಸಿಯಾಗಿ ಬೆಳೆದ ಅದಕ್ಕೆ ಅನ್ನದ ಬೇಲಿಯ ಕಟ್ಟಿ, ನಾಣ್ಯದ ನೀರು ಹಾಕಿ, ಜ್ಞಾನದ ಹಸಿರ ಹಬ್ಬಿಸಿದ ವೀರಶೈವ ವಿದ್ಯಾವರ್ಧಕ ಸಂಘವು ಇದೀಗ ನೂರರ ಹೆಮ್ಮರವಾಗಿ ಬೆಳೆದು ನಿಂತಿದೆ. ನಮ್ಮ ಸಂಘ ನೀಡಿದ ನೆರಳು, ಹಬ್ಬಿಸಿದ ಬೆಳಕು ಶಬ್ದಗಳಿಂದ ಹೇಳಿ ಮುಗಿಸುವಂಥದಲ್ಲ! ಇದು ಕಣ್ಣಿಗೆ ಕಾಣುವ ಹೆಮ್ಮರದ ಬಗ್ಗೆ ಹೇಳುವ ಮಾತಲ್ಲ; ನೋಡುವ ನೋಟ!

ಗುರುಗಳ ಸಂಕಲ್ಪಶಕ್ತಿಯನ್ನು, ನೂರಾರು ಹಿರಿಯರ ಇಚ್ಛಾಶಕ್ತಿಯನ್ನು ಶಾಶ್ವತಗೊಳಿಸಿದ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘ ನೂರು ಸಂವತ್ಸರಗಳನ್ನು ಪೂರೈಸಿ ಸಾರ್ಥಕ ಸಂದರ್ಭವನ್ನು ಇದೀಗ ಸಂಭ್ರಮದಿಂದ ಅನುಭವಿಸುತ್ತಿದೆ. ಸದ್ಯ ಶ್ರೀ ಅಲ್ಲಂ ಬಸವರಾಜರವರ ಅಧ್ಯಕ್ಷತೆಯಲ್ಲಿ ಶ್ರೀ ಏಚರೆಡ್ಡಿ ಸತೀಶ್ ಇವರು ಉಪಾಧ್ಯಕ್ಷರಾಗಿ, ಶ್ರೀ ಉಡೇದ ಬಸವರಾಜ ಇವರು ಕಾರ್ಯದರ್ಶಿಗಳಾಗಿ, ಶ್ರೀ ಐಗೋಳ್ ಚಿದಾನಂದ ಇವರು ಜಂಟಿ ಕಾರ್ಯದರ್ಶಿಗಳಾಗಿ ಮತ್ತು ಶ್ರೀ ಮುಂಡಾಸದ ಮುಪ್ಪಣ್ಣನವರು ಕೋಶಾಧಿಕಾರಿಗಳಾಗಿ ಹಾಗೂ ಗೌರವಾನ್ವಿತ ಕಾರ್ಯಕಾರಿ ಸಮಿತಿ ಸದಸ್ಯರುಗಳ ಸಹಕಾರದೊಂದಿಗೆ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವ ಚಾರಿತ್ರಿಕ ಘಟ್ಟದ ಈ ಸಂದರ್ಭವನ್ನು ಸ್ಮರಣಾರ್ಹಗೊಳಿಸುವ ಸಮಾರಂಭಕ್ಕೆ ನಾವೆಲ್ಲರೂ ಸೇರಿ ಸಂಭ್ರಮಿಸೋಣ. ಇದು ಗುರುಗಳಿಗೆ ಸಲ್ಲಿಸುವ ಪ್ರಣಾಮ, ಹಿರಿಯರಿಗೆ ಮಾಡುವ ನಮನ, ಪರಂಪರೆಗೆ ಸಲ್ಲಿಸುವ ಗೌರವ.

ನಹಿ ಜ್ಞಾನೇನ ಸದೃಶಂ

ಸಂಘದ ಶತಮಾನೋತ್ಸವ ಸ್ಮರಣ ಸಂಚಿಕೆಯಿಂದ (2016). ಕೊನೆಯ ಪರಿಚ್ಛೇದದಲ್ಲಿ ಹೆಸರಿಸಿರುವ ಪದಾಧಿಕಾರಿಗಳು ಆ ವರ್ಷದವರು.

ಕಾಲಾನುಕ್ರಮ

  1. 1909

    ಬೀಜ ವಿಚಾರ

    ಬಳ್ಳಾರಿಯಲ್ಲಿ ಡಿಸೆಂಬರ್ 27 ರಿಂದ 30 ರವರೆಗೆ ನಡೆದ ಅಖಿಲಭಾರತ ವೀರಶೈವ ಮಹಾಸಭಾದ ಐದನೇ ಮಹಾಧಿವೇಶನದಲ್ಲಿ ವಿದ್ಯಾವರ್ಧಕ ಸಂಘ ಸ್ಥಾಪನೆಯ ನಿರ್ಣಯ.

  2. 1916

    ಸಂಘದ ಕಾರ್ಯಾರಂಭ

    ಆಗಸ್ಟ್ ತಿಂಗಳಲ್ಲಿ, ಶ್ರೀ ಹಾನಗಲ್ ಕುಮಾರ ಮಹಾಸ್ವಾಮಿಗಳ ಮತ್ತು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ, ಸಕ್ಕರಿ ಕರಡೆಪ್ಪನವರ ಚೌಕಿಯಲ್ಲಿ ‘ವಿದ್ಯಾರ್ಥಿಗಳ ವಿಶ್ರಾಂತಿ ನಿಲಯ’ ಆರಂಭ. ಕೌತಾಳ ಯಜಮಾನ್ ಗುರುಶಾಂತಪ್ಪನವರು ಅಧ್ಯಕ್ಷರು, ಹೀರದ ಕರಿಬಸಪ್ಪನವರು ಮೊದಲ ಕಾರ್ಯದರ್ಶಿ.

  3. 1918

    ನೋಂದಣಿ

    ಮಾರ್ಚ್ 7 ರಂದು ‘ಮದ್ರಾಸ್ ವೀರಶೈವ ವಿದ್ಯಾವರ್ಧಕ ಸಂಘ’ ಎಂಬ ಹೆಸರಿನಲ್ಲಿ ನೋಂದಣಿ; ತೊಗರಿ ವೀರಮಲ್ಲಪ್ಪನವರು ಉಪಾಧ್ಯಕ್ಷರು.

  4. 1924

    ಕನ್ನಡ ಶಾಲೆ

    ತೆಲುಗು ಮಾಧ್ಯಮದ ಶಾಲೆಗಳಷ್ಟೇ ಇದ್ದ ಜಿಲ್ಲೆಯಲ್ಲಿ ಏಪ್ರಿಲ್‌ನಲ್ಲಿ ಹೀರದ ಸೂಗಮ್ಮ ಕನ್ನಡ ಪ್ರಾಥಮಿಕ ಶಾಲೆ ಆರಂಭ.

  5. 1942

    ರಜತ ಮಹೋತ್ಸವ

    ಶೆಟ್ರು ಗುರುಶಾಂತಪ್ಪ ಪ್ರೌಢಶಾಲೆ ಆರಂಭ; ಜಿಲ್ಲೆಗೆ ಕಾಲೇಜು ತರುವ ಸಂಕಲ್ಪ.

  6. 1945

    ಜಿಲ್ಲೆಯ ಮೊದಲ ಕಾಲೇಜು

    ಸಮಾಜದಿಂದ ಸಂಗ್ರಹಿಸಿದ ಮೂರು ಲಕ್ಷ ರೂಪಾಯಿ ಮತ್ತು ಮದ್ರಾಸ್ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ವೀರಶೈವ ಕಾಲೇಜು ಸ್ಥಾಪನೆ. 1956ರ ಹೊತ್ತಿಗೆ 101 ಎಕರೆ ಜಾಗ.

  7. 1963–75

    ಶಿಕ್ಷಣ, ಮಹಿಳಾ, ಗ್ರಾಮೀಣ ಮತ್ತು ಕಾನೂನು ಕಾಲೇಜುಗಳು

    ಕೊಟ್ಟೂರುಸ್ವಾಮಿ ಶಿಕ್ಷಣ ಮಹಾವಿದ್ಯಾಲಯ, ಹೊಸಪೇಟೆಯ ವಿಜಯನಗರ ಕಾಲೇಜು, ಕೊಟ್ಟೂರು, ಹೂವಿನಹಡಗಲಿ ಮತ್ತು ಹರಪನಹಳ್ಳಿಯ ಕಾಲೇಜುಗಳು, ಮಹಿಳಾ ಕಾಲೇಜು ಮತ್ತು ಕಾನೂನು ಕಾಲೇಜು.

  8. 1980–98

    ವೃತ್ತಿಪರ ಶಿಕ್ಷಣ

    ಬಳ್ಳಾರಿಯಲ್ಲಿ ಇಂಜಿನಿಯರಿಂಗ್ ಕಾಲೇಜು, ಔಷಧ ವಿಜ್ಞಾನ ಕಾಲೇಜು, ಹೊಸಪೇಟೆಯಲ್ಲಿ ಎರಡನೇ ಇಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಮತ್ತು ಮ್ಯಾನೇಜ್‌ಮೆಂಟ್ ಸಂಸ್ಥೆ.

  9. 2016

    ಶತಮಾನೋತ್ಸವ

    ಸಂಘವು ನೂರು ವರ್ಷಗಳ ವಿದ್ಯಾಸೇವೆಯನ್ನು ಪೂರೈಸಿ ಶತಮಾನೋತ್ಸವವನ್ನು ಆಚರಿಸಿತು.

ಐವತ್ತು ವರ್ಷ ಪೂರೈಸಿದ ಸಂಸ್ಥೆಗಳು

ಎಲ್ಲ ಸಂಸ್ಥೆಗಳು
  • ವೀರಶೈವ ಕಾಲೇಜು, ಬಳ್ಳಾರಿ
  • ವಿಜಯನಗರ ಕಾಲೇಜು, ಹೊಸಪೇಟೆ
  • ವಿಜಯನಗರ ಸಂಯುಕ್ತ ಪದವಿಪೂರ್ವ ಕಾಲೇಜು, ಮುನಿರಾಬಾದ್
  • ಕೊಟ್ಟೂರುಸ್ವಾಮಿ ಶಿಕ್ಷಣ ಮಹಾವಿದ್ಯಾಲಯ, ಬಳ್ಳಾರಿ
  • ಶೆಟ್ರು ಗುರುಶಾಂತಪ್ಪ ಸಂಯುಕ್ತ ಪದವಿಪೂರ್ವ ಕಾಲೇಜು, ಬಳ್ಳಾರಿ
  • ಹರಗಿನಡೋಣಿ ಬಸವನಗೌಡ ಪ್ರೌಢಶಾಲೆ, ಕುಡಿತಿನಿ
  • ಹೀರದ ಸೂಗಮ್ಮ ಹಿರಿಯ ಪ್ರಾಥಮಿಕ ಶಾಲೆ, ಬಳ್ಳಾರಿ
  • ರಜತ ಮಹೋತ್ಸವ ಸ್ಮಾರಕ ಶಾಲೆ, ಬಳ್ಳಾರಿ